ಮಣಿಪುರ
	ಈಶಾನ್ಯ ಭಾರತದ ಒಂದು ರಾಜ್ಯ. ಈ ರಾಜ್ಯವನ್ನು ಪೂರ್ವ ಮತ್ತು ದಕ್ಷಿಣದಲ್ಲಿ ಬರ್ಮಾದೇಶ. ನೈಋತ್ಯದಲ್ಲಿ ಮಿಜೋರಾಮ್. ಪಶ್ಚಿಮದಲ್ಲಿ ಅಸ್ಸಾಮ್, ಉತ್ತರದಲ್ಲಿ ನಾಗಾಲ್ಯಾಂಡ್ ರಾಜ್ಯ ಸುತ್ತುವರಿದಿವೆ. ಮಣಿಪುರ ರಾಜ್ಯವನ್ನು ಇತ್ತೀಚೆಗೆ (25-5-83) ಎಂಟು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ. ರಾಜ್ಯದ ಒಟ್ಟು ವಿಸ್ತೀರ್ಣ 22,356 ಚಕಿಮೀ. ಜನಸಂಖ್ಯೆ 14,20,953 (1981). ರಾಜಧಾನಿ: ಇಂಫಾಲ್. ಜನಸಂಖ್ಯೆ 1, 56, 622 (1981).

	ಪ್ರಾಕೃತಿಕ ಲಕ್ಷಣ: ಮಣಿಪುರದ ಒಟ್ಟು ಮೇಲ್ಮೈ ವಿಸ್ತೀರ್ಣದಲ್ಲಿ ಶೇಕಡಾ 90ಕ್ಕೂ ಹೆಚ್ಚು ಭಾಗ ಬೆಟ್ಟ ಗುಡ್ಡಗಳಿಂದ ತುಂಬಿದೆ. ಉಳಿದ ಬಯಲು ಪ್ರದೇಶದಲ್ಲಿ ಮಣಿಪುರ ಕೊಳ್ಳವೇ ದೊಡ್ಡದು. ಇದು ರಾಜ್ಯದ ಮಧ್ಯದಲ್ಲಿದೆ. ಎತ್ತರ ಸಮುದ್ರಮಟ್ಟದಿಂದ 750 ಮೀ. ಸುತ್ತಲೂ ಗಿರಿಪರ್ವತಗಳು ಆವರಿಸಿವೆ. ರಾಜಧಾನಿ ಇಂಫಾಲ್ ಈ ಕೊಳ್ಳದಲ್ಲೇ ಇದೆ. ಪರ್ವತಗಳು ಉತ್ತರದಕ್ಷಿಣವಾಗಿದ್ದು ಕೆಲವು 2,700 ಮೀ ಎತ್ತರಕ್ಕೂ ಬಾಚಿವೆ. ಉತ್ತರದಲ್ಲಿ ನಾಗಾಪರ್ವತ, ಪೂರ್ವದಲ್ಲಿ ಬರ್ಮಾ ಗಡಿಯಾಗಿ ಮಣಿಪುರ ಪರ್ವತ, ದಕ್ಷಿಣದಲ್ಲಿ ಲುಶಾಯಿ ಮತ್ತು ಪಶ್ಚಿಮದಲ್ಲಿ ಚಿನ್ ಪರ್ವತಗಳು ಇವೆ. ಇಲ್ಲಿಯ ನದಿಗಳಲ್ಲಿ ಇಂಫಾಲ್ ಅಥವಾ ಮಣಿಪುರ, ಇರಿಲ್, ಥೌಬಾಲ್ ಮತ್ತು ಬರಕ್ ಪ್ರಧಾನವಾದವು. ಮುಖ್ಯವಾದ ಇಂಫಾಲ್ ನದಿ ರಾಜಧಾನಿಯ ಬದಿಯಲ್ಲೇ ಹರಿದು ದಕ್ಷಿಣದಲ್ಲಿ ಇರಿಲ್, ಥೌಬಾಲ್ ನದಿಗಳನ್ನು ಸೇರಿಸಿಕೊಂಡು ದಕ್ಷಿಣದ ಆಳವಾದ ಗಿರಿ ಕೊರಕಲುಗಳಲ್ಲಿ ಹರಿದು ಬರ್ಮಾದೇಶದಲ್ಲಿ ಬಿಂದ್ವಿನ್ ನದಿಯನ್ನು ಸೇರುತ್ತದೆ. ಬರಕ್ ನದಿ ನೈಋತ್ಯದಲ್ಲಿ ಅಸ್ಸಾಮ್ ರಾಜ್ಯವನ್ನು ಅಡ್ಡಹಾಯ್ದು ಬಾಂಗ್ಲಾ ದೇಶದಲ್ಲಿ ಸರಮಾ ಎಂಬ ಹೆಸರಿನಿಂದ ಪ್ರವಹಿಸುವುದು. ಈ ರಾಜ್ಯದ ಒಂದು ಪ್ರಾಕೃತಿಕ ವಿಶೇಷವೆಂದರೆ ಅದರ ಅನೇಕ ಗಿರಿಸರೋವರಗಳು. ಇವುಗಳಲ್ಲಿ ಅತಿ ದೊಡ್ಡದಾದ ಲಾಕ್‍ಟಾಕ್ ಸರೋವರ ಮಳೆಗಾಲದಲ್ಲಿ 100 ಚಕಿಮೀ ವಿಸ್ತಾರವಿದ್ದರೆ ಬೇಸಗೆಯಲ್ಲಿ 64 ಚಕಿಮೀ ವಿಸ್ತಾರವುಳ್ಳದ್ದಾಗಿರುತ್ತದೆ. ಇದರ ನಡುವೆ ಎದ್ದಿರುವ ಗಿರಿಕೋಡುಗಳು ಕೆಲವು ದ್ವೀಪಗಳನ್ನು ನಿರ್ಮಿಸಿವೆ. ಇವುಗಳಲ್ಲಿ ಬೆಸ್ತರ ವಸತಿಗಳಿವೆ. ಇಲ್ಲಿಯ ಎಲ್ಲ ಸರೋವರಗಳೂ ಖಾದ್ಯ ಮತ್ಸ್ಯಗಳಿಗೆ ಆಶ್ರಯವಾಗಿವೆ.

	ಈ ರಾಜ್ಯದ ಹವಾಗುಣ ಕೊಳ್ಳಪ್ರದೇಶಗಳಲ್ಲಿ ಹಿತಕರ ಮತ್ತು ಸಮಶೀತೋಷ್ಣವಾಗಿದ್ದರೆ ಪರ್ವತಪ್ರದೇಶಗಳಲ್ಲಿ ಶೀತವಾಗಿದೆ. ವಾರ್ಷಿಕ ಸರಾಸರಿ ಮಳೆ 1700 ಮಿಲಿಮೀಟರ್. ರಾಜ್ಯದಲ್ಲಿ ಒಟ್ಟು 15,154 ಚಕಿಮೀ ಕಾಡುಪ್ರದೇಶವಿದೆ. ಓಕ್ ಮ್ಯಗ್ನೋಲಿಯ ಬೆಂಕುವಾಪಿನ್. ಸೂಚಿಪರ್ಣಿ ಮೊದಲಾದ ವೃಕ್ಷಗಳಿದ್ದರೂ ತೇಗ ಮತ್ತು ಬಿದಿರು ಆರ್ಥಿಕ ದೃಷ್ಟಿಯಿಂದ ಮಹತ್ತ್ವ ಹೊಂದಿವೆ. ಜಿರಿ ಮತ್ತು ಬರಕ್ ನದಿಗಳ ಜಲಾನಯನ ಪ್ರದೇಶದ 2585 ಚಕಿಮೀ ವಿಸ್ತೀರ್ಣದಲ್ಲೇ ವರ್ಷಕ್ಕೆ ಮೂರು ಲಕ್ಷ ಟನ್ ಬಿದಿರು ಕಡಿಯಲಾಗುತ್ತದೆ. 1981-82ನೆಯ ಸಾಲಿನಲ್ಲಿ ಈ ರಾಜ್ಯಕ್ಕೆ ಅರಣ್ಯೋತ್ಪನ್ನದಿಂದ ರೂ.39 ಕೋಟಿ ಆದಾಯ ಸಂದಿದೆ. ಆನೆ, ಹುಲಿ, ಚಿರತೆ, ಕಾಡುಕೋಣ, ಪ್ರಪಂಚದಲ್ಲೇ ದೊಡ್ಡಗಾತ್ರದ್ದಾದ ಕಾಡುಹೋರಿ ಗೌರ್, ಅಲ್ಲದೆ, ಏಕಶೃಂಗ ಖಡ್ಗ ಮೃಗಗಳೂ ಹುಬ್ಬುಗೋಡಿನ ಜಿಂಕೆಗಳೂ ಇಲ್ಲಿಯ ಉಲ್ಲೇಖಾರ್ಹ ವನ್ಯಮೃಗಗಳು. ಆದರೆ ಅತಿಬೇಟೆಯ ಕಾರಣವಾಗಿ ಖಡ್ಗಮೃಗ ಮತ್ತು ಜಿಂಕೆಗಳ ಸಂಖ್ಯೆ ಇಳಿಮುಖವಾಗಿದೆ.

	ರಾಜ್ಯದ ಮುಖ್ಯಬೆಳೆ ಬತ್ತ. ಇದು 1.86 ಲಕ್ಷ ಹೆಕ್ಟೇರ್ ವಿಸ್ತಾರ ಪ್ರದೇಶ ವ್ಯಾಪಿಸಿದೆ. ಗೋದಿ, ಮುಸುಕಿನ ಜೋಳವನ್ನೂ ಬೆಳೆಸುತ್ತಾರೆ. ಇತರ ದ್ವಿದಳ ಧಾನ್ಯಗಳನ್ನು ಕೂಡ ಬೆಳೆಸುವುದುಂಟು. 1982-83ನೆಯ ಸಾಲಿನಲ್ಲಿ ಒಟ್ಟು 358,000 ಟನ್‍ಗಳ ಆಹಾರಧಾನ್ಯಗಳನ್ನು ಬೆಳೆಸಲಾಗಿತ್ತು. ತೋಟಗಾರಿಕೆಯಲ್ಲಿ ಕಿತ್ತಳೆ, ಅನಾನಸ್, ಬಾಳೆ, ಪೀಚ್  ಮುಂತಾದ ಫಲಗಳನ್ನು ಬೆಳೆಯುತ್ತಾರೆ. ಮತ್ಸ್ಯೋದ್ಯಮವುಂಟು. 1981-82ರಲ್ಲಿ 3450 ಟನ್ ಮೀನನ್ನು ಹಿಡಿಯಲಾಗಿತ್ತು. ಮಣಿಪುರ ರಾಜ್ಯದಲ್ಲಿ ಲಾಕ್‍ಟಾಕ್, ಸಿಂಗ್ದ, ಇಂಫಾಲ್ ಬ್ಯಾರೇಜ್, ಕೊಪಮ್, ಸಕಮೈಬ್ಯಾರೇಜ್, ಥೌಬಾಲ್ ಮತ್ತು ಕೂಗ ಎಂಬ 7 ಭಾರಿ ಮತ್ತು ಮಧ್ಯಮ ನೀರಾವರಿ ಯೋಜನೆಗಳನ್ನು ಕೈಗೊಳ್ಳಲಾಗಿದೆ. 1930ರಿಂದಲೇ ಈ ರಾಜ್ಯದಲ್ಲಿ ವಿದ್ಯುದುತ್ಪಾದನೆಯನ್ನು ಆರಂಭಿಸಲಾಯಿತಾದರೂ ಇನ್ನೂ ರಾಜ್ಯದಲ್ಲಿ ಸಾಕಷ್ಟು ವಿದ್ಯುತ್ತಿನ ಪೂರೈಕೆ ಆಗುತ್ತಿಲ್ಲ. 1983ರಲ್ಲಿ ಡೀಸೆಲ್ ಜನರೇಟರ್‍ಗಳಿಂದ 22 ಮಿಮೀ ವಿದ್ಯುತ್ ಉತ್ಪಾದಿಸಲಾಗುತ್ತಿತ್ತು. ಇಲ್ಲಿಯ ಪ್ರಮುಖ ಕೈಗಾರಿಕೆಯೆಂದರೆ ಕೈಮಗ್ಗದ ಬಟ್ಟೆ ತಯಾರಿಕೆ. ಮಣಿಪುರಿಯ ಚಿತ್ತಾಕರ್ಷಕ ಕೈಮಗ್ಗದ ಬಟ್ಟೆಗಳಿಗೆ ಹೆಚ್ಚು ಬೇಡಿಕೆ ಇದೆ. ಈ ರಾಜ್ಯದ 1983-84ರ ವಾರ್ಷಿಕ ಕೈಗಾರಿಕಾಭಿವೃದ್ಧಿಗೆ ರೂ. 217 ಲಕ್ಷ ಯೋಜಿಸಲಾಗಿತ್ತು. ರೇಷ್ಮೆ ಉದ್ಯಮಕ್ಕೆ ಬೇರೆ ಯೋಜನೆ ಕಲ್ಪಿಸಲಾಗಿದೆ. ಖಂಡಸಾರಿ, ಚಿಕ್ಕ ಸಿಮೆಂಟ್ ಕಾರ್ಖಾನೆಗಳು, ಕಾಗದ, ಸಕ್ಕರೆ ತಯಾರಿಕಾ ಕಾರ್ಖಾನೆಗಳು ಇವೆ.

	ಈ ರಾಜ್ಯದ ಶೇಕಡಾ 65 ಮಂದಿ ಆಡುವ ಭಾಷೆ ಮಣಿಪುರಿ. ಇವರಲ್ಲಿ ಮಣಿಪುರ ಕೊಳ್ಳದ ಆದಿವಾಸಿಗಳು. ಭಾರತದ ಅನ್ಯಪ್ರದೇಶಗಳಿಂದ ಬಂದವರು ಮತ್ತು ಬರ್ಮಿ ಮೂಲದವರು ಸೇರಿದ್ದಾರೆ. ಆದಿಯಲ್ಲಿ ಈ ಜನಾಂಗ ಸೊರಾರೇನ್ ದೇವನ ಆರಾಧಕರಾಗಿದ್ದು ಕ್ರಿ.ಶ. 8ನೆಯ ಶತಮಾನದ ಅನಂತರ ಹಿಂದೂ ಧರ್ಮವನ್ನು ಒಪ್ಪಿಕೊಂಡರೆಂದು ನಂಬಲಾಗಿದೆ. ಆದಿಮ ಧರ್ಮಗಳನ್ನು ಪಾಲಿಸುವವರೂ ಸುಮಾರಾಗಿದ್ದಾರೆ. ಕ್ರೈಸ್ತರ ಸಂಖ್ಯಾ ಪ್ರಮಾಣ 26.3 ಮತ್ತು ಮುಸ್ಲಿಮರದು 7. ಉತ್ತರದ ನಾಗರೂ ದಕ್ಷಿಣದ ತುರ್ಕಿಗಳೂ ಸೇರಿದಂತೆ ಪರಿಶಿಷ್ಟವರ್ಗದ ಆದಿಮ ಜನಾಂಗಗಳ ಕೆಲವೇ ಮಂದಿ ಇದ್ದಾರೆ. 

	ಸಮಾಜದಲ್ಲಿ ಸ್ತ್ರೀಯರ ಸ್ಥಾನ ಉನ್ನತವಾಗಿದೆ. ಮಣಿಪುರ ಕೊಳ್ಳದಲ್ಲಿ ಹೆಚ್ಚಿನ ವ್ಯಾಪಾರ ವ್ಯವಹಾರ ನಿರ್ವಹಿಸುವವರು ಮೆಯ್ದೀ ಸ್ತ್ರೀಯರು. ಜನರ ಕಲಾಪ್ರತಿಭೆ ಶ್ರೇಷ್ಠವಾದುದು. ಅವರ ಕೈಮಗ್ಗದ ನೇಯ್ಗೆ ಮೋಹಕವಾಗಿದ್ದು ದೇಶವಿದೇಶಗಳಲ್ಲಿ ಪ್ರಶಂಸೆ ಪಡೆದಿದೆ. ಕೃಷ್ಣನ ಪ್ರಣಯ ಲೀಲೆಗಳೇ ಪ್ರಧಾನ ವಸ್ತುವಾಗುಳ್ಳ ಮಣಿಪುರ ನೃತ್ಯಶೈಲಿ ಕಲಾಪ್ರಪಂಚದಲ್ಲಿ ಪ್ರಸಿದ್ಧವಾದದ್ದು. ಕವಿ ರವೀಂದ್ರನಾಥ ಠಾಕೂರರು ಈ ನೃತ್ಯದ ಸೌಂದರ್ಯವನ್ನು ಗುರುತಿಸಿ ಜನಪ್ರಿಯಗೊಳಿಸಿದರು.

	ಮಣಿಪುರ ರಾಜ್ಯಕ್ಕೆ ರೈಲು ಸಂಪರ್ಕವಿಲ್ಲ. ರಾಜಧಾನಿ ಇಂಫಾಲಕ್ಕೆ ರಾಷ್ಟ್ರೀಯ ಹೆದ್ದಾರಿಯ ಮತ್ತು ವಿಮಾನದ ಸಂಪರ್ಕವಿದೆ. ಅಂಚೆ, ತಂತಿ, ಆಸ್ಪತ್ರೆ ಮುಂತಾದವುಗಳ ಸೌಲಭ್ಯವಿದೆ. ಶಿಕ್ಷಣ ಕುರಿತಾಗಿ ಮಣಿಪುರದಲ್ಲಿ 1982-83ನೆಯ ಸಾಲಿನಲ್ಲಿ 2821 ಪ್ರಾಥಮಿಕ, 459 ಮಾಧ್ಯಮಿಕ, 301 ಪ್ರೌಢಶಾಲೆಗಳೂ ವಿಜ್ಞಾನ ಕಾಲೇಜೂ ಸೇರಿದಂತೆ ಒಟ್ಟು 23 ಕಾಲೇಜುಗಳೂ ಇದ್ದುವು. 1981ರಲ್ಲಿ ಜವಹರಲಾಲ್ ವಿಶ್ವವಿದ್ಯಾನಿಲಯವನ್ನು ಮಣಿಪುರ ವಿಶ್ವವಿದ್ಯಾಲಯದಲ್ಲಿ ವಿಲೀನಗೊಳಿಸಲಾಯಿತು.

	ಪ್ರಾಗೈತಿಹಾಸಿಕ ಕಲ್ಲಿನ ಗುದ್ದಲಿಗಳು ಮಣಿಪುರದಲ್ಲಿ ಸಿಕ್ಕಿದ್ದು ಇದೊಂದು ಪ್ರಾಚೀನ ಮಾನವ ವಸತಿ ಪ್ರದೇಶವಾಗಿರಬೇಕೆಂದು ಚಿಕ್ಕ ಚಿಕ್ಕ ತುಂಡು ರಾಜ್ಯಗಳಾಗಿದ್ದ ಮಣಿಪುರವನ್ನು ಕ್ರಿ.ಶ. ಒಂದನೆಯ ಶತಮಾನದಲ್ಲಿ ಪಕಂದ್‍ಬಾ ಎಂಬ ಭಾರತೀಯ ಗೆದ್ದು ಒಂದು ರಾಜ್ಯವಾಗಿ ಒಗ್ಗೂಡಿಸಿದನೆಂದೂ ಅನಂತರ ಏಳು ಶತಮಾನಗಳ ಕಾಲ ಅವನ ವಂಶೀಯರು ರಾಜ್ಯವಿಸ್ತರಣೆ ಮಾಡಿ ಆಳಿದರೆಂದೂ ತಿಳಿಯುತ್ತದೆ. ಬರ್ಮಾದೇಶದವರಿಂದ ಆಗಾಗ್ಗೆ ಆಗುತ್ತಿದ್ದ ಧಾಳಿಗಳಿಂದಾಗಿ 1762ರಲ್ಲಿ ಇಲ್ಲಿಯ ರಾಜ ಬ್ರಿಟಿಷರ ಸಹಾಯ ಕೇಳಿದ. ಮುಂದೆ ಈ ರಾಜ್ಯ ಬ್ರಿಟಿಷರ ಅಧೀನ ಸಂಸ್ಥಾನವಾಯಿತು. 1947ರಲ್ಲಿ ಅದು ಸ್ವತಂತ್ರ ಭಾರತದಲ್ಲಿ ಸೇರ್ಪಡೆ ಹೊಂದಿ 1956ರ ರಾಜ್ಯಪುನರ್ಘಟನೆಯಲ್ಲಿ ಕೇಂದ್ರಾಡಳಿತ ಪ್ರದೇಶವಾಯಿತು. 1972ರಲ್ಲಿ ಭಾರತದ ಒಂದು ರಾಜ್ಯವಾಯಿತು.
(ಪಿ.ವಿ.ಎ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ